ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Tuesday, April 13, 2010

Mock Press Meet



ಅಣುಕು ಪತ್ರಿಕಾಗೋಷ್ಠಿ

ನಾವು ಒಂದಷ್ಟು ವರದಿ ಮಾಡುವುದು ಕಲಿತೆವು ಈಗ ಒಂದು ಘಟನೆ ಅಥವಾ ವರದಿ ಸುದ್ದಿಯಾಗುವುದು ಹೇಗೆ? ವರದಿಯನ್ನು ಹೇಗೆ ಸಂಪಾದಿಸುತ್ತಾರೆ? ಪತ್ರಿಕೆ ಕಛೇರಿಗಳಲ್ಲಿ ಹೇಗೆ ಅದು ಅಚ್ಚಾಗುತ್ತದೆ?
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ವರದಿಗಾರರು ಪತ್ರಿಕಾಗೋಷ್ಠಿಗಳಲ್ಲಿ ಸುದ್ದಿಯನ್ನು ಸಂಗ್ರಹಿಸುವುದು ಗೊತ್ತಿತ್ತು. ಅಲ್ಲಿ ಮಾಧ್ಯಮದವರಿಗೆ ಹಾಗೂ ಪತ್ರಿಕಾಗೋಷ್ಠಿಯನ್ನು ನಡೆಸುವವರಿಗೆ ಮಾತ್ರ ಪ್ರವೇಶವೆಂದು ತಿಳಿದು ಬೇಸರವಾಯಿತು.
ಕರ್ನಾಟಕದಲ್ಲಿ ಹೆಚ್ಚು ಪ್ರಚಾರದಲ್ಲಿರುವ ಪ್ರಜಾವಾಣಿ  ಪತ್ರಿಕೆ ಕಛೇರಿಗೆ ಭೇಟಿನೀಡಿ ಕಲಿಯೋಣವೆಂದು ನಿರ್ಧರಿಸಿದೆವು. ಅವಕಾಶ ಸಿಗುವುದೋ ಇಲ್ಲವೋ? ಎಂಬ ಅನುಮಾನದೊಂದಿಗೆ ಸಂಪಾದಕರಿಗೆ ಫೋನ್ ಮಾಡಿದೆವು. ಸಂಪಾದಕರು ಕೂಡಲೇ ಮೆಚ್ಚುಗೆಯಿಂದ ಒಪ್ಪಿ ನ್ಯೂಸ್ ಚೀಫ್ ಸತ್ಯನಾರಾಯಣ್ ಸಾರ್ರವರೊಂದಿಗೆ ಮಾತನಾಡಿ ದಿನಾಂಕವನ್ನು ಗೊತ್ತುಪಡಿಸಲು ಹೇಳಿದರು. ನಮಗೆ ತುಂಬಾ ಸಂತೋಷವಾಯಿತು.

 
ಪ್ರೆಸ್ ಕ್ಲಬ್ನಲ್ಲಿ ಭಾನುವಾರದಂದು ತರಬೇತಿಯನ್ನು ಪಡೆಯುತ್ತೇವೆ ಎಂದಾಗ ಕಾರ್ಯದರ್ಶಿಮಲ್ಲಪ್ಪನವರು ಅಂದು ಯಾವ ಪತ್ರಿಕಾಗೋಷ್ಠಿಯೂ ಇರುವುದಿಲ್ಲ. ಸುಮ್ಮನೆ ಬಂದು ಏನುಮಾಡುತ್ತೀರಿ ಎಂದು ಪ್ರಶ್ನಿಸಿದರು. ಅದು ನಮಗೂ ದೊಡ್ಡ ಪ್ರಶ್ನೆಯಾಯಿತು.

 
ನಾವು ಎದೆಗುಂದಲಿಲ್ಲ.. ಕೂಡಲೇ ಭ್ರಷ್ಟಾಚಾರದ ವಿರುದ್ಧ ನಾವೇ ಒಂದು ಅಣುಕು ಪತ್ರಿಕಾಗೋಷ್ಠಿಯನ್ನು ನಡೆಸಲು ತೀಮರ್ಾನಿಸಿ ಇತರ ಮಾಧ್ಯಮ ಮಿತ್ರರಿಗೆ ಆಹ್ವಾನಿಸಿದೆವು.

 ಅಂದು..

 ಬೆಳಿಗ್ಗೆಯೇ ಎಲ್ಲಾ ಗೆಳೆಯರೂ ಸೇರಿಕೊಂಡು ಮತ್ತೊಮ್ಮೆ ತರಬೇತಿಯನ್ನು ಮೆಲುಕು ಹಾಕಿದೆವು. ನಮ್ಮ ಗೆಳೆಯರೇ ಡ್ರೈವರ್ ಕೆಲಸಗಳನ್ನು ಮಾಡುವ ವಾಹನ ಆಟೋಗಳಿಗೆ ತಲಾ 20ರೂಗಳನ್ನು ನೀಡಿ ಡಿಸೇಲ್ ತುಂಬಿಸಿಕೊಂಡು ಪ್ರೆಸ್  ಕ್ಲಬ್ ಕಡೆ ಹೊರೆಟೆವು.


ಗೋಷ್ಠಿಯನ್ನು ನಡೆಸಿಕೊಡುವ ಗೆಳೆಯರ ಎದೆಗಳಲ್ಲಿ ನಡುಕ ಆರಂಭವಾಯಿತು. ಪ್ರೆಸ್ ಕ್ಲಬ್ನ ಎದುರಿಗಿರುವ ಕಬ್ಬನ್ ಪಾರ್ಕಿನಲ್ಲಿ ಕುಳಿತು ಮತ್ತೊಮ್ಮೆ ತಯಾರಿ ನಡೆಸಿ ಧೈರ್ಯದಿಂದ ಗೋಷ್ಠಿಯ ಕಡೆಗೆ ಹೊರೆಟೆವು

.
10.30ಕ್ಕೆ ಎಂದು ಹೇಳಿದ್ದ ಪತ್ರಿಕಾಗೋಷ್ಠಿಗೆ 11ಗಂಟೆಯಾದರು ಯಾವುದೇ ಮಾಧ್ಯಮದವರು ಬರಲಿಲ್ಲ. ಇದ್ದವರು ನಮ್ಮದೇ ತಂಡದ ವರದಿಗಾರರು. ಸರಿ.. ಗೋಷ್ಠಿ ಆರಂಭಿಸಿದೆವು. ಗೋಷ್ಠಿ ಆರಂಭವಾಗುತ್ತಿದ್ದಂತೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹಾಗೂ ಸಂಜೆವಾಣಿ ಪತ್ರಿಕೆಯ ಇಬ್ಬರು ವರದಿಗಾರ್ತಿಯರು ನಮ್ಮನ್ನು ಸೇರಿಕೊಂಡರು. ನಮಗೆ ಒಂದಷ್ಟು ಹುಮ್ಮಸ್ಸು ತುಂಬಿತ್ತು.  
ಗೋಷ್ಠಿಯಲ್ಲಿ ಪಾಲ್ಗೊಂಡವರು: ರಾಮಕೃಷ್ಣ (ಡಾಮಿ), ಕಿರಣ್ (ಚಿಕ್ಕಣ್ಣ), ಪ್ರತಾಪ ಮತ್ತು ರವರು ಗೋಷ್ಠಿಯನ್ನು ನಡೆಸಿದರು. ಇತರ ಗೆಳೆಯರು ವರದಿಗಾರರಾದರು.

ಸ್ವಾಗತ:
ಸಂಘಟನೆಯ ರಾಮಕೃಷ್ಣರವರು ಎಲ್ಲರಿಗೂ ಸ್ವಾಗತ ಮಾಡಿ ಗೋಷ್ಠಿಯಲ್ಲಿದ್ದವರನ್ನು ಪರಿಚಯ ಮಾಡಿಕೊಟ್ಟರು.ಪ್ರಸ್ತಾವನೆ: ಗೋಷ್ಠಿಯ ಬಗ್ಗೆ ಪ್ರಸ್ತಾವನೆಯನ್ನು ಕಿರಣ್ (ಚಿಕ್ಕಣ್ಣ)ರವರು ಮಾಡಿಕೊಟ್ಟರು.ಒತ್ತಾಯಗಳು: ಪ್ರತಾಪ ರವರು ಸಂಘಟನೆಯ ಒತ್ತಾಯಗಳ ಬಗ್ಗೆ ವಿವರಿಸಿದರು.

ಶುರುವಾಯ್ತು ಪ್ರಶ್ನೆಗಳ ಸುರಿಮಳೆ... 
ಬಂದಿದ್ದ ಪತ್ರಿಕಾ ಗೆಳತಿಯರು 'ನ್ಯಾಯಾಲಯವೇ ಭ್ರಷ್ಟಾಚಾರದಲ್ಲಿ ತುಂಬಿದೆ. ವೈ.ಸಂಪಂಗಿಯಂತಹ ಶಾಸಕರು ನೇರವಾಗಿ ಸಿಕ್ಕಿಬಿದ್ದರೂ ಯಾವುದೇ ಶಿಕ್ಷೆಯಾಗದೇ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ನೀವು ಭ್ರಷ್ಟಾಚಾರವನ್ನು ಹೇಗೆ ನಿಲ್ಲಿಸುತ್ತೀರಾ?. ಸರ್ಕಾರಗಳು ಪೊಲೀಸ್ ಇಲಾಖೆಯೇ ಅತ್ಯಂತ ಭ್ರಷ್ಟವಾಗಿವೆ. ನೀವು ಏನು ಮಾಡಲು ಸಾಧ್ಯ? ಪ್ರಶ್ನೆಗಳ ಧಾಳಿಯನ್ನಾರಂಭಿಸಿದರು.

ಅಣುಕು ಪತ್ರಿಕಾಗೋಷ್ಠಿ ಆಗಿರುವುದರಿಂದ ನಮ್ಮ ಪತ್ರಿಕಾಗೋಷ್ಠಿಯ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಎಂದುಕೊಂಡಿದ್ದ ನಮಗೆಲ್ಲಾ ಗಾಬರಿಯಾಯಿತು.ಕೂಡಲೇ ಗೋಷ್ಠಿಯಲ್ಲಿ ಹಾಜರಿದ್ದ ನಮ್ಮ ಸಂಘಟಕರು ಉತ್ತರ ನೀಡಿದರು. ಹೌದು ಈ ವ್ಯವಸ್ಥೆ ಭ್ರಷ್ಟವಾಗಿದೆ. ಹಾಗೆಂದು ನಾವು ಮೌನವಹಿಸಿ ಸಹಿಸಿಕೊಂಡು ಹೋಗಲು ಸಾಧ್ಯವಿಲ್ಲ. ಜನರನ್ನು ಜಾಗೃತರನ್ನಾಗಿ ಮಾಡುತ್ತೇವೆ. ಆ ಮೂಲಕ ಬದಲಾವಣೆಯನ್ನು ತರುತ್ತೇವೆ ಎಂದು ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆ ಅನುಭವಿ ವರದಿಗಾರರು 'ಸಾಧ್ಯವೇ ಇಲ್ಲಾ.. ನೀವು ಯಾವುದೇ ಕೆಲಸಗಳನ್ನು ಮಾಡಿಸಿಕೊಳ್ಳಲೂ ಲಂಚವನ್ನು ನೀಡಲೇ ಬೇಕಾಗುತ್ತದೆ. ಇಷ್ಟು ಹಾಳಾಗಿರುವ ವ್ಯವಸ್ಥೆಯನ್ನು ನೀವು ಸರಿಮಾಡಲು ಸಾಧ್ಯವೇ ಇಲ್ಲಾ.. ಲೋಕಾಯುಕ್ತರಿಗೇ ಬಾಗದ ಜನ ನಿಮ್ಮಿಂದ ಬದಲಾಗುತ್ತಾರೆಯೇ? '
ಎಂದು ಪ್ರಶ್ನಿಸಿದರು. 
 'ಖಂಡಿತವಾಗಿಯೂ.. ನೀವು ಹೇಳುತ್ತಿರುವುದು ನಿಜ. ಆದರೆ.. ಓದಲು ಬರೆಯಲು ಬಾರದೇ ಡ್ರಗ್ಸ್ ಕುಡಿತ ಇತ್ಯಾಧಿ ಕೆಟ್ಟ ಚಟಗಳಿಗೆ ದಾಸರಾಗಿದ್ದ ನಮ್ಮ 30 ಜನ ಯುವಕರನ್ನು ನಾವು ಜಾಗೃತರಾಗಿಸಿದ್ದೇವೆ ಇದು ಸಾಧ್ಯವಾಗಿದೆ. ನಾವೆಲ್ಲರೂ ನಿಮ್ಮ ಮುಂದಿದ್ದೇವೆ ಹಾಗೆಯೇ ಮುಂದೊಂದು ದಿನ ಈ ಸಂಖ್ಯೆ ಹೆಚ್ಚಿ ಸಮಾಜಿಕ ಬದಲಾವಣೆಗೆ ಕಾರಣವಾಗುವ ಬಗ್ಗೆ ನಾವು ವಿಶ್ವಾಸ ಇಟ್ಟಿದ್ದೇವೆ. 'ಎಂಬ ಮಾತುಗಳು ಅವರನ್ನು ಚಕಿತರನ್ನಾಗಿ ಮಾಡಿದವು.ಅವರು ನಮಗೆ ಶುಭಕೋರಿ ಹೊರಟರು.


ಪ್ರಜಾವಾಣಿಯ ಸತ್ಯನಾರಾಯಣ ರಾವ್ ಸರ್ ನಮಗೆಲ್ಲಾ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಪ್ರೆಸ್ಕ್ಲಬ್ನಲ್ಲಿ ಊಟ ನಮ್ಮನ್ನು ಘಮ್ಮೆಂದು ಕಾಡುತ್ತಿತ್ತು. ಆದರೆ ನಾವು ವರದಿಯನ್ನು ಪೂರೈಸಿಯೇ ನಂತರ ಊಟ ಮಾಡಬೇಕಾದ ನಿಬಂಧನೆಯನ್ನು ಸ್ವಯಂಗೊಳಿಸಿದ್ದೆವು. ಹಾಗಾಗಿ ಬಾಯಿ ನೀರನ್ನು ನುಂಗುತ್ತಾ ವರದಿ ಮಾಡಿದೆವು.


ಪ್ರಜಾವಾಣಿಗೆ ಲಗ್ಗೆ
ಸುಮಾರು 3 ಗಂಟೆಯ ಸಮಯಕ್ಕೆ ಸರಿಯಾಗಿ ನಾವು ಪ್ರಜಾವಾಣಿಗೆ ಲಗ್ಗೆ ಹಾಕಿದೆವು. ಸಂಪಾದಕರು ಹಾಗೂ ಮುಖ್ಯ ವರದಿಗಾರರ ಅನುಪಸ್ಥಿತಿಯಲ್ಲಿ ನಮಗೆ ನಾರಾಯಣ್ ರಾವ್ ಮೆಟ್ರೋ ವಿಭಾಗದ ಮುಖ್ಯಸ್ಥರು ಪ್ರಜಾವಾಣಿ ಕಛೇರಿಯ ಹಂತ ಹಂತಗಳನ್ನು ವಿವರಿಸಿದರು.
 
ಪುಟ ವಿನ್ಯಾಸ 
ಚಿತ್ರ ಸಂಪಾದನೆ ಹಾಗೂ 
ಶೇಖರಣೆಸುದ್ದಿಯ ತಯಾರಿಕಾ ಹಂತಗಳು ಇನ್ನಿತರೆ ವಿಚಾರಗಳನ್ನು ತಿಳಿಸಿಕೊಟ್ಟರು.
 

 

ನಂತರ ಕ್ಯಾಂಟಿನ್ನಲ್ಲಿ ನಮಗಾಗಿ ಬಿಸಿಬಾದಾಮಿ ಹಾಲು ಬಿಸ್ಕೆಟ್ ತಯಾರಿಗಿದ್ದವು. ನಾವೆಲ್ಲ ಸವಿದು ಎಲ್ಲಾ ಪ್ರಜಾವಾಣಿ ಬಳಗಕ್ಕೂ ಧನ್ಯವಾದಗಳನ್ನು ಹೇಳಿ ಹೊರಟೆವು. 




ನಾವು ಹೊರ ಬರುತ್ತಿದ್ದಂತೆ ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ  ಪತ್ರಿಕಾಗೋಷ್ಠಿ ಬಗ್ಗೆ ಆಕರ್ಷಕವಾಗಿ ಸುದ್ದಿ ಪ್ರಕಟವಾಗಿತ್ತು. ಇದು ನಮ್ಮಲ್ಲಿ ಹೊಸ ಕನಸನ್ನು ಚಿಗುರೋಡೆಸಿತು. ನಮ್ಮದೇ ಆದ ಮಾಧ್ಯಮದ ಕನಸುಗಳು ಚಿಗುರೊಡೆಯುತ್ತಿವೆ..