ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Friday, July 5, 2013

ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿ ವಿಕಸನ ಕಾರ್ಯಕ್ರಮ (ಚಾಮರಾಜನಗರ ಸರ್ಕಾರಿ ಶಾಲೆ)

ಚಾಮರಾಜನಗರ:


ರಾಜ್ಯದ ಹಿಂದುಳಿದ ಹಾಗೂ ಗಡಿ ಜಿಲ್ಲೆ ಚಾಮರಾಜನಗರ. ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಹೋದ ನಮಗೆ ಚಾಮರಾಜನಗರದ ಮುಗ್ಧ ಜನರ ಮನಸುಗಳು ಬೇಗ ಹತ್ತಿರವಾದವು. ಅವರೊಡನೆ ಕೂಡಿ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಲು ಮನಸು ಬಯಸಿತು. ಎಂಥಾ ಕಾರ್ಯಕ್ರಮಗಳನ್ನು ಅಲ್ಲಿನ ಜನರಿಗೆ ಕೊಡುವುದು??? 

ಕೆಲವು ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಿದೆವು. ಚಾಮರಾಜನಗರದ ದೊಡ್ಡರಾಯಪೇಟೆಯ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡೆವು. ಅಲ್ಲಿ ದೈಹಿಕ ಶಿಕ್ಷಕ ನಾಗರಾಜ್ ಸರ್ ಪರಿಚಯವಾಯಿತು. ಅವರ ಕಳಕಳಿಯ ವ್ಯಕ್ತಿತ್ವ ನಮಗೆ ಹಿತವೆನಿಸಿತು. ಅವರೊಡನೆ ಚರ್ಚಿಸಿದೆವು.  ಎಸ್. ಎಸ್.ಎಲ್.ಸಿ ಪರೀಕ್ಷೆ ಹತ್ತಿರವಿದ್ದ ಕಾರಣ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಒತ್ತಡದಲ್ಲಿ ಸಿಲುಕಿ ಫೇಲ್ ಆಗುವ ಸಂದರ್ಭವನ್ನು ತಪ್ಪಿಸಲು ಹಾಗೂ ಪರೀಕ್ಷೆಯ ಸಿದ್ಧತೆಯನ್ನು ಕುರಿತು ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಕಂಡು ಬಂತು. ಸರಿ ಒಂದು ದಿನದ ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿ ವಿಕಸನ ಕಾರ್ಯಕ್ರಮವನ್ನು ಮಾಡೋಣವೆಂದು ನಿರ್ಧರಿಸಿದೆವು.  

ಪರೀಕ್ಷಾ ಸಿದ್ಧತೆ ಹಾಗೂ ವ್ಯಕ್ತಿ ವಿಕಸನ ಕಾರ್ಯಕ್ರಮ: (ದೊಡ್ಡರಾಯಪೇಟೆ ವ್ಯಕ್ತಿ ವಿಕಸನ ಕಾರ್ಯಕ್ರಮ)

ಬೆಳಿಗ್ಗೆ ಎದ್ದು ದನ-ಕರುಗಳಿಗೆ ಮೇವು ಹಾಕಿ ಅಪ್ಪ ಅಮ್ಮನ ಜೊತೆ ಹೊಲ-ಗದ್ದೆ ಕೆಲಸ ಮಾಡಿ ಎದ್ದು ಬಿದ್ದು ಓಡಿ ಬರುವ ಗ್ರಾಮೀಣ ಮಕ್ಕಳಿಗೆ 4 ಗೋಡೆಗಳ ಮಧ್ಯೆ ಕುಳಿತು ಪುಸ್ತಕಕ್ಕೆ ಮಸ್ತಕವನ್ನು ಒಡ್ಡಿಕೊಳ್ಳುವುದು ಕಷ್ಟವೇ ಸರಿ. ಬಾಯಿ ಬಿಟ್ಟರೆ ಕೋಲು ಬೀಸುವ ಉಪಧ್ಯಾಯರು. ಉಫ್... ಯಾವಾಗ ಬಿಡ್ತಾರೋ ಬ್ಯಾಗು ಹಿಡಿದು ಮನೆಗೆ ಓಡಿ ಬಿಡೋಣ ಎಂದು ಕಾಯುವ ಮಕ್ಕಳು. ಈ ಮಧ್ಯೆ ಪಿಟಿ (ದೈಹಿಕ ಶಿಕ್ಷಣ)ದ ಹೆಸರಿನಲ್ಲಿ ಸಿಗುವ ಬಿಡುವ ಅವರಿಗೊಂದು ಸಂತೋಷದ ಅವಕಾಶವೇ ಸರಿ. ಗುರುಗಳ ಗರಗಸದಿಂದ ಮೆದುಳನ್ನು ಸ್ವಲ್ಪ ಬಿಡುವಾಗಿ ಇಟ್ಟುಕೊಂಡು ಉಸಿರಾಡುವಂತೆ ಭಾಸವಾಗುತ್ತಾರೆ. 

ಇನ್ನು ಪರೀಕ್ಷೆ ಎಂದರೆ ಬೇಡಪ್ಪಾ.. ಬೇಡ!

ಎಲ್ಲವೂ ನೆನಪಿರುತ್ತೆ ಪರೀಕ್ಷೆ ಬಂತೂ ಅಂದ್ರೆ ಗೊತ್ತಿರೋ ಅಲ್ಪ ಸ್ವಲ್ಪನೂ ಮರೆತು ಹೋಗುತ್ತೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗೋಥರ ಮನೆಪಾಠ ಇರಲಿ. ಶಾಲೆಯಲ್ಲೇ ನೆಟ್ಟಗೇ ಪಾಠ ಸಿಗೋದು ಕಷ್ಟ. ದಿನಕ್ಕೆ 4 ಗಂಟೆ ಕರೆಂಟು ಕೊಟ್ರೇ ಗೋರ್ನಮೆಂಟ್ ಗ್ರೇಟು! ಇಂಥಾ ಸ್ಥಿತಿ ಗ್ರಾಮೀಣ ಭಾಗದ ಮಕ್ಕಳಿಗೆ.

ಬಡತನ, ಮನೆ, ಆಟ ಒತ್ತಡದ ಪಾಠದ ಜಂಜಾಟದಲ್ಲಿ ನಲಿಯುತ ಕಲಿಯೋದು ಹೇಗೆ? ಕಲಿಯೋದನ್ನ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯೋದು ಹೇಗೆ? ಹೀಗೆ ಎಲ್ಲದಕ್ಕೂ ಅವರೊಡನೆ ಸಂವಾದ ನಡೆಸುತ್ತಾ ಇದಷ್ಟರಲ್ಲೇ ಕಾರ್ಯಕ್ರಮವನ್ನು ನಡೆಸಲಾಯಿತು. ಮಕ್ಕಳು ಕಾಳಜಿಯಿಂದ ಭಾಗವಹಿಸಿದರು. 


ಮುಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಕಾರ್ಯಕ್ರಮ ಯಶಸ್ಸನ್ನು ಕಂಡಿತು.