ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Monday, February 22, 2010

ಪತ್ರಿಕೋದ್ಯಮ ತರಬೇತಿ


ಪತ್ರಿಕೋದ್ಯಮ ತರಬೇತಿ

ನಾವು ಹಲವಾರು ತಿಂಗಳುಗಳ ಕಾಲ ಕಷ್ಟಪಟ್ಟು ಪ್ರತಿ ತಿಂಗಳು ರೂಪಾಯಿಗಳನ್ನು ಕೂಡಿಹಾಕಿ ಅತ್ಯಂತ ಕಷ್ಟದಿಂದ ಬೆವರಸಿರಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದು ತಕ್ಕ ಮಟ್ಟಿಗೆ ಯಶಸ್ವಿಯೂ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ನಮ್ಮ ಪ್ರಯತ್ನಕ್ಕೆ ಶ್ಲಾಘನೆಯನ್ನು ನೀಡಿದರು. ನಮ್ಮ ಎಲ್ಲಾ ಕಾರ್ಯಕರ್ತರೂ ತುಂಬಾ ಹೆಮ್ಮೆಪಟ್ಟುಕೊಂಡರು. ಹಲವಾರು ತಿಂಗಳುಗಳಿಂದ ಮಾಡಿದ್ದ ಶ್ರಮ ನಮಗೆ ತೃಪ್ತಿಯನ್ನು ನೀಡಿತು.

ಆದರೆ ನಮ್ಮ ಎದೆಗಳಲ್ಲೊಂದು ನೋವಿನ ಬೆಂಕಿಯ ಕಿಡಿ ಹೊತ್ತಿಕೊಂಡಿತ್ತು. ಕಾರ್ಯಕ್ರಮದ ಮಾರನೇ ದಿನ ಸಂಜೆ ನಾವೆಲ್ಲರೂ ಕಾರ್ಯಕ್ರಮದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಭೆ ಸೇರಿದ್ದೆವು. ಕಾರ್ಯಕ್ರಮಕ್ಕೆ ಹಲವಾರು ಮಾಧ್ಯಮದವರು ಪಾಲ್ಗೊಂಡು ನಮ್ಮ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ವರದಿಗಳನ್ನು ಸಿದ್ದಪಡಿಸಿಕೊಂಡಿದ್ದರು. ತಡವಾಗಿ ಬಂದ ಕೆಲ ಮಾಧ್ಯಮದವರಂತೂ ಸನ್ಮಾನಿತರನ್ನು ಮತ್ತೆ ಮತ್ತೆ ಕೂರಿಸಿ ತಮಗೆ ಬೇಕಾದಂತೆ ವಿವಿಧ ಭಂಗಿಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು. ಮತ್ತೆ ಕೆಲವರು ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನವೇ ಬಂದು ಕಾದು ಕುಳಿತ್ತಿದ್ದರು.

ಮಾರನೇ ದಿನ ಯಾವುದೇ ಚಾನೆಲ್ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ನಮ್ಮ ಕಾರ್ಯಕ್ರಮದ ಫೋಟೋ ವರದಿ ಇರಲಿ ಒಂದು ಅಕ್ಷರವೂ ಸಹ ಬರಲಿಲ್ಲ. ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಮಾಡಿರಲಿಲ್ಲ, ಆದರೆ ಅಷ್ಟೂ ಮಾಧ್ಯಮದವರು ಬೇಕು ಬೇಕಾದಂಗೆಲ್ಲಾ ಕಿರಿ ಕಿರಿ ಮಾಡಿ ಫೋಟೋ ಕ್ಲಿಕ್ಕಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದು ಹಾಗೂ ಕೆಲ ಮಾಧ್ಯಮದವರು ಮುಖಪುಟದಲ್ಲೇ ಕಾರ್ಯಕ್ರಮ ವರದಿ ಬರುವುದೆಂದು ಹೇಳಿದ್ದು ನಮಗೆ ಆಸೆ ಹುಟ್ಟಿಸಿತ್ತು.


ಹಲವಾರು ಜನಪರ ಪ್ರತಿಭಟನೆ ಹೋರಾಟಗಳನ್ನು ಸಂಘಟಿಸಿದ್ದ ಸಂಘಟಕರಿಗೆ ಈ ರೀತಿಯ ಮಾಧ್ಯಮದವರ ನಡುವಳಿಕೆ ಸಾಮಾನ್ಯವೇ ಎನ್ನಿಸಿತ್ತು ವಿಶೇಷವೇನೂ ಇರಲಿಲ್ಲ. ಆದರೆ ತಮ್ಮದೇ ಜಂಜಾಟದ ಬದುಕಿನ ನಡುವೆ ಒದ್ದಾಡುತ್ತಾ ಎಲ್ಲಾ ನೋವುಗಳನ್ನು ನುಂಗಿಕೊಂಡು ಫಳಕ್.. ಫಳಕ್.. ಎಂದು ಮುಖಕ್ಕೆ ಬಡಿದ ಮಾಧ್ಯಮದವರ ಕ್ಯಾಮರಾ ಬೆಳಕು ಸಾಮಾನ್ಯ ಕಾರ್ಯಕರ್ತರ ಕನಸುಗಳ ಮೇಲೆ ಬರೆ ಹಾಕಿತ್ತು.


ಅಲ್ಲಾ ಅಣ್ಣಾ.. ಅಷ್ಟು ಜನ ಬಂದು ಹಂಗ್ ನಿಂತ್ಕೊಳ್ಳಿ ಹಿಂಗೆ ನಿಂತ್ಕೊಳ್ಳಿ.. ನಾಳೆ ಪೇಪರ್ ನೋಡಿ ನಿಮ್ಮ ನ್ಯೂಸ್ ಫೋಟೋ ಬಂದಿರುತ್ತೆ ಅಂತೆಲ್ಲಾ ಹೇಳಿ.. ಒಂದು ಲೈನೂ ಬರ್ದಿಲ್ಲ.. ಯಾಕೆ?

ನಾವು ತಪ್ಪು ಮಾಡ್ಲಿಲ್ಲಾಂದ್ರೂ ಕಳ್ಳ್ರು ಅಂತ ಪೊಲೀಸೋರು ಎಳ್ಕೊಂಡೋಗಿ ನಾವು ಬೇಡ ಅಂದ್ರೂ ಸ್ಲೇಟ್ ಹಿಡ್ಸಿ ಫೋಟೋನ ದೊಡ್ಡ ದೊಡ್ಡದಾಗಿ ಹಾಕ್ತಾರೆ.. ಆದ್ರೆ ನಾವು ಕುಡಿಯೋದು ಎಲ್ಲಾ ಬಿಟ್ಟೂ ಒಳ್ಳೇ ಕೆಲಸ ಮಾಡಿದ್ರೆ ಯಾಕೆ ಹಾಕಲ್ಲಾ?..

ಅವರುಗಳ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ. ಈ ಸಮಾಜ ಬಡವರು ತಪ್ಪು ಮಾಡಿದಾಗ ಕಳ್ಳರಂತೆ ಚಿತ್ರಿಸುವುದಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಅವರ ತ್ಯಾಗ ಸಾಧನೆಗಳಿಗೆ ಯಾಕೆ ಕೊಡುವುದಿಲ್ಲ!. ಶ್ರೀಮಂತರ ನಾಯಿ ಕಳೆದು ಹೋದರೆ ಡಾಗ್ ಷೋಗೆ ನೀಡುವ ಮುತುರ್ವಜಿ ನೂರಾರು ಬಡ ಕಾಮರ್ಿಕರು ಕಟ್ಟಡ ಕಟ್ಟುವಾಗ ಚರಂಡಿ ಸ್ವಚ್ಛಗೊಳಿಸುವಾಗ ಪ್ರಾಣಬಿಟ್ಟರೂ ಕೊಡುವುದಿಲ್ಲ ಯಾಕೆ?.

 
ಓಹೋ ಪತ್ರಿಕೆಗಳನ್ನು ನಡೆಸುವವರು ಓದುವವರು ಕೇವಲ ಶ್ರೀಮಂತ ವರ್ಗದವರೇ ಆಗಿದ್ದಾರೆ. ಹಾಗಾಗಿ ಪತ್ರಿಕೆಗಳು ಅವರ ಪರವಾಗಿಯೇ ಇವೆ ಅಲ್ಲವೇ!. ಬೆವರು ರಕ್ತ ಸುರಿಸಿ ಮರಗಳನ್ನು ಬೆಳಸಿ ಕೂಯ್ದು ಕಾಗದ ತಯಾರಿಸಿ ಯಂತ್ರಗಳನ್ನು ತಯಾರಿಸಿ ಮಸಿಯನ್ನು ತಯಾರಿಸುವ ಹಾಗೂ ಇವರ ಕಛೇರಿಗಳನ್ನು ಸ್ವಚ್ಛಗೊಳಿಸುವ ಬಡವರಿಗೆ ಯಾವ ಅಧಿಕಾರವಿದೆ ಅಲ್ಲವೇ?.

 
 ಈ ಪ್ರಶ್ನೆಗಳು ಹಲವು ತಿಂಗಳುಗಳ ಕಾಲ ನಮ್ಮ ಹೃದಯಗಳನ್ನು ಮೆದುಳುಗಳನ್ನು ಹಿಂಡಿ ಹಿಂಡಿ ಕಾಡಿದವು. ಕೊನೆಗೆ ಎಲ್ಲಾ ಮಾಧ್ಯಮಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳೋಣ ಎಂಬ ಸಲಹೆಗಳೂ ಬಂದವು. ಆದರೆ ಪ್ರಚಾರ ಬಯಸದ ನಮಗೆ ಅದು ಸೂಕ್ತವಾಗಿರಲಿಲ್ಲ. ಅಲ್ಲದೇ ನಮಗೆ ಯಾರ ದಾಕ್ಷಿಣ್ಯವೂ ಬೇಡವಾಗಿತ್ತು. ಕಾರ್ಯ ಮುಖೇನ ಉತ್ತರವನ್ನು ನೀಡುವ ಛಲವನ್ನು ಹುಟ್ಟು ಹಾಕಿತು.