ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Thursday, July 4, 2013

'ಜಾತಿ ಧರ್ಮ ಹಣ ಹೆಂಡದ ಮೂಲಕ ಮತಯಾಚನೆ ಮಾಡುವವರನ್ನು ಒದ್ದೋಡಿಸಿ'


'ಜಾತಿ ಧರ್ಮ ಹಣ ಹೆಂಡದ ಮೂಲಕ ಮತಯಾಚನೆ ವಿರುದ್ಧದ ಜಾಗೃತಿ ಆಂದೋಲನದ ಬೀದಿನಾಟಕ ಪ್ರದರ್ಶನ'

   


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2010ರ ಚುನಾವಣೆ ಸಂದರ್ಭದಲ್ಲಿ ಹಿಂದಿನ ಚುನಾವಣೆಗಳಂತೆ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಹಣ ಹೆಂಡ ಹಂಚಿ ಜಾತಿ ಧರ್ಮದ ಹೆಸರಿನಲ್ಲಿ ಹಾಗೂ ಸುಳ್ಳು ಆಶ್ವಾಸನೆಗಳ ಕೊಡುವ ಮೂಲಕ  ಮತದಾರರನ್ನು ವಂಚಿಸಿ ಭ್ರಷ್ಟಾಚಾರದ ಮೂಲಕ ಜನರನ್ನು ಲೂಟಿ ಮಾಡುವುದು ಸಾಮಾನ್ಯ

ಈ ಕಾರಣದಿಂದ ಸಾಮಾಜಿಕ ಕಾಳಜಿಯುಳ್ಳ ಜನಾಸ್ತ್ರ ಸಂಘಟನೆಯು ಬೆಂಗಳೂರಿನ ಮತದಾರರನ್ನು ಎಚ್ಚರಿಸಲು ಹಾಗೂ ಜಾಗೃತಿ ಮೂಡಿಸಲು ದಿನಾಂಕ 21.3.2010ರಂದು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಉದ್ಭಾಟನಾ ಕಾರ್ಯಕ್ರಮದ ಮೂಲಕ 'ಜಾತಿ ಧರ್ಮ ಹಣ ಹೆಂಡದ ಮೂಲಕ ಮತಯಾಚನೆ ಮಾಡುವವರನ್ನು ಒದ್ದೋಡಿಸಿ' ಎಂಬ ಆಂದೋಲನವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ಪ್ರಮುಖ ಬಡಾವಣೆ ಹಾಗೂ ಬೀದಿಗಳಲ್ಲಿ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಒಂದು ವಾರ ಮೊದಲೇ ಸಾರ್ವಜನಿಕರ ಪರವಾದ ಒತ್ತಾಯವನ್ನು ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಎದುರು ಜನಪರ ಕಾಳಜಿಯ ಬದ್ಧತೆಯ ಪ್ರತಿಜ್ಞೆ ಸ್ವೀಕಾರಕ್ಕೆ ಆಹ್ವಾನ ನೀಡಲಾಯಿತು.

ರಾಜಕೀಯ ಪಕ್ಷ ಹಾಗೂ ಚುನಾವಣಾ ಅಭ್ಯರ್ಥಿಗಳನ್ನು ಆಹ್ವಾನಿಸಿ ನೀಡಲಾದ ಒತ್ತಾಯಗಳು:


1. ಜನವಿರೋಧಿ ಪೊಳ್ಳು ಯೋಜನೆಗಳನ್ನು ನಿಲ್ಲಿಸಿ ಉತ್ತಮ ಜನಪರ ಯೋಜನೆಗಳ ಮೂಲಕ ನಗರದ ದುಡಿಯುವ ಜನರು, ಬೀದಿ ವ್ಯಾಪಾರಿಗಳು ಹಾಗೂ ಪ್ರಾಣಿ, ಪಕ್ಷಿ, ಗಿಡ ಮರ, ಪರಿಸರ ರಕ್ಷಣೆಗೆ ಮುಂದಾಗಬೇಕು.
2. ಗೂಂಢಾ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಅವಕಾಶ ನೀಡದೇ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ, ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
3. ಸೂಕ್ತ ರಕ್ಷಣೆ ಹಾಗೂ ನ್ಯಾಯ ಸಿಗದೇ ಅತ್ಯಾಚಾರ ಕೊಲೆ ಹಲ್ಲೆಗೆ ಒಳಗಾಗುತ್ತಿರುವ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ರಕ್ಷಣೆಗೆ ಮುಂದಾಗಬೇಕು.
4. ಭ್ರಷ್ಟಚಾರ ಮುಕ್ತ ಆಡಳಿತ ನಡೆಸಲು ಬದ್ಧರಾಗಿರಬೇಕು.
5. ಜಾತಿ, ಧರ್ಮದ ಆಧಾರಿತವಾಗಿ ಹಾಗೂ ಹಣ, ಹೆಂಡ, ಸೀರೆ ಇತ್ಯಾಧಿಗಳನ್ನು ನೀಡದೇ ಮತಯಾಚನೆ ಮಾಡಬೇಕು.
6. ಪ್ರಚಾರ ಸಂದರ್ಭದಲ್ಲಿ ನೈತಿಕತೆಯನ್ನು ಪ್ರದರ್ಶಿಸಿ ಆಶ್ವಾಸನೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು. & ಆಶ್ವಾಸನೆಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭದಲ್ಲಿ ರಾಜಿನಾಮೆ ನೀಡಲು ಸಿದ್ದರಿರಬೇಕು.
7. ಬಡಜನರ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಉಚಿತ ಆರೋಗ್ಯ, ವಸತಿ, ಶಿಕ್ಷಣ ನೀಡಲು ಬದ್ದರಾಗಬೇಕು.
8. ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
9. ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರಿಗೆ ಹಾಗೂ ಅವರ ಹಕ್ಕುಗಳಿಗೆ ಸೂಕ್ತ ರಕ್ಷಣೆ ನೀಡಿ ಗೌರವಿಸಬೇಕು.
10. ಚುನಾವಣಾ ವೆಚ್ಚದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು.
11. ಪರೀಕ್ಷೆಗಳು ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಚಾರ ಮಾಡಬೇಕು.



ಭ್ರಷ್ಟಾಚಾರ, ಜಾತಿವಾದ, ಜನವಿರೋಧಿ ನೀತಿಗಳಿಗೆ ತಮ್ಮನ್ನು ಮಾರಿಕೊಂಡ ರಾಜಕೀಯ ಪಕ್ಷಗಳು ಈ ಪ್ರತಿಜ್ಞೆಯಲ್ಲಿ ಪಾಲ್ಗೊಳ್ಳುವ ಧೈರ್ಯವನ್ನು ಪ್ರದರ್ಶಿಸಲಿಲ್ಲ. ಕೆಲವು ಸ್ವತಂತ್ರ ಅಭ್ಯರ್ಥಿಗಳು, ಲೋಕಸತ್ತ ಪಕ್ಷದ ಕೆಲವು ಸದಸ್ಯರು ಹಾಗೂ ಜೆಡಿಎಸ್ ನ ನಗರ ಘಟಕದ ಸದಸ್ಯರೊಬ್ಬರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕನಿಷ್ಠ ಪ್ರತಿಕ್ರಿಯೆಯಾದರೂ ಅವರೂ ಸಹ ಅವರು ಪ್ರತಿಜ್ಞೆ ಸ್ವೀಕರಿಸಲು ಸಿದ್ಧರಿರಲಿಲ್ಲ. ಇದು ಚುನಾವಣೆಯಲ್ಲಿನ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿತ್ತು.


ಈ ಜನವಿರೋಧಿ ರಾಜಕೀಯ ಪಕ್ಷಗಳ ವಿರುದ್ಧ ಸಾರ್ವಜನಿರಲ್ಲಿ ಜಾಗೃತಿ ಮೂಢಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮತದಾರರು ಸಂಘಟಿತರಾಗಿ ಸುಳ್ಳು ಆಶ್ವಾಸನೆಗಳನ್ನು ನೀಡುವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳನ್ನು ಆಶ್ವಾಸನೆಗಳನ್ನು ಲಿಖಿತ ರೂಪದಲ್ಲಿ ಪಡೆಯಬೇಕು. ಪ್ರತಿನಿಧಿಗಳು ಮಾತಿಗೆ ತಪ್ಪಿದ ಸಂದರ್ಭದಲ್ಲಿ ಬೀದಿಗೆ ಇಳಿದು ಛೀಮಾರಿ ಹಾಕುವ ಹಾಗೂ ಅಧಿಕಾರದಿಂದ ಕೆಳಗಿಳಿಸುವ ಕೆಲಸ ಮಾಡಬೇಕೆಂದು ನಗರದ ವಿವಿಧ ಸ್ಲಂಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜುಗಳ ಸುತ್ತ ಬೀದಿನಾಟಕ, ಜಾಗೃತಿ ಹಾಡುಗಳು ಹಾಗೂ ಕರಪತ್ರದ ಮೂಲಕ ಜಾಗೃತಿಯನ್ನು ಮೂಢಿಸಲಾಯಿತು. ಈ ಕಾರ್ಯಕ್ರಮಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾರ್ಯಕ್ರಮ ಜನ ಮೆಚ್ಚುಗೆಯನ್ನು ಪಡೆಯಿತು.

ನಿಷೇಧಾಜ್ಞೆ ಹೆಸರಿನಲ್ಲಿ ಬಂಧಿಸಲು ಪ್ರಯತ್ನಿಸಿದ ಪೊಲೀಸರು ಜನರ ಛೀಮಾರಿ:


ಸಂಘಟನೆಯು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಆಂದೋಲನಕ್ಕೆ ಲಿಖಿತ ಒಪ್ಪಿಗೆಯನ್ನು ಪಡೆದಿತ್ತು. ಆದರೆ ಚುನಾವಣೆಯ ಕಾರಣದಿಂದಾಗಿ ನಿಷೇದಾಜ್ಞೆಯನ್ನು ಹೇರಲಾಗಿದೆ ಎಂಬ ನೆವ ಹೇಳಿ ಪೊಲೀಸರು ಸಂಘಟನೆಯ ಕಾರ್ಯಕರ್ತರನ್ನು ವಿವಿದೆಡೆ ಬಂಧಿಸಲು ಮುಂದಾಗಿದ್ದರು. ಆ ಎಲ್ಲಾ ಸಂದರ್ಭದಲ್ಲಿ ಸಂಘಟನೆಯ ಜೊತೆಗೆ ಸಾರ್ವಜನಿಕರು ನಮ್ಮ ಬೆಂಬಲಕ್ಕೆ ನಿಂತರು, ವಿಶೇಷವಾಗಿ ಶೇಷಾದ್ರಿಪುರಂ ಕಾಲೇಜ್ ವಿದ್ಯಾರ್ಥಿಗಳು, 'ಅಲ್ರೀ.. ರಾತ್ರಿ ಹೊತ್ತು ಬಾಟ್ಲು ಕೊಡೋಕೆ ಬರೋರನ್ನ ಬಿಟ್ಟು ಜನರಿಗೆ ಒಳ್ಳೇ ವಿಷಯ ಹೇಳೋಕೆ ಬರೋರನ್ನ ಹಿಡಿಯೋಕೆ ಬಂದಿದ್ದೀರಲ್ಲಾ ಹೋಗ್ರೀ' ಎಂದು ಛೀಮಾರಿ ಹಾಕಿ ಕಳುಹಿಸುತ್ತಿದ್ದರು. ಕೆಲವು ಕಡೆ ಪೊಲೀಸ್ ಪೇದೆಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿದ್ದರು ಇದು ಸಂಘಟನೆಯ  ಉತ್ತಮ ಕೆಲಸಕ್ಕೆ ಸಿಕ್ಕ ಉತ್ತಮ  ಸಹಕಾರವೇ ಸರಿ :)

ಪಾಲ್ಗೊಂಡ ಸಂಘಟನೆಗಳ ಗಣ್ಯರು: 


ಲೋಹಿಯಾ ವಿಚಾರವಾದಿಗಳು, ಪಿಡಿಎಫ್ ಪ್ರಜಾಪ್ರಭುತ್ವಕ್ಕಾಗಿ ಜನರ ಒಕ್ಕೂಟದ ಪ್ರೊ. ನಗರಗೆರೆ ರಮೇಶ್, ಪಿಯುಸಿಎಲ್ ನ ರಾಮದಾಸ್ ರಾವ್, ಕರ್ನಾಟಕ  ತಮಿಳ್ ಮಕ್ಕಳ್ ಇಯ್ಯಕ್ಕಂನ ಗಣೇಶ್, ನಾಥನ್, ಇತರರು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಆಂದೋಲನಕ್ಕೆ ತಮ್ಮ ಸಹಕಾರ ನೀಡಿದರು. 


ಪ್ರಮುಖ ಸುದ್ಧಿ ವಾಹಿನಿಗಳು ಹಾಗೂ ಪತ್ರಿಕೆಗಳು ತಾವು ಸಹ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ ಪ್ರಚಾರವನ್ನು ಒದಗಿಸಿದವು.

ಆಯೋಜನೆ: ಜನಾಸ್ತ್ರ, ಮಹಿಳಾ ಹೋರಾಟ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ನವಯುವಶಕ್ತಿ, ಚೇತನಧಾರೆ ಟ್ರಸ್ಟ್, ಬೆಂಗಳೂರು ಯುವ ಚಾವಡಿ, ಜನಬಿಂಬ ಕಲಾ ತಂಡ ಹಾಗೂ ಇತರ
ಜನಪರ ಸಂಘಟನೆಗಳು.




















ಚೇತನಧಾರೆ ಟ್ರಸ್ಟ್ ಮತ್ತು ಜನಾಸ್ತ್ರ ಸಂಘಟನೆ.
ನಂ.10, 2ನೇ ಅಡ್ಡರಸ್ತೆ, ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು- 560022.
ಫೋ: 9448702368.
                         http://bangaloreslumyouth.blogspot.in/                http://www.swabhimanimahilahorata.blogspot.in/