ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Sunday, June 16, 2013

'ಸಂತ್ರಸ್ತರನ್ನು ನಿರ್ಲಕ್ಷ್ಯಿಸಿ ನಡೆಸುತ್ತಿರುವ ಕೃಷ್ಣದೇವರಾಯನ ಪಟ್ಟಾಭಿಷೇಕ ವಿರೋಧಿಸಿ ಪ್ರತಿಭಟನೆ' ಹಾಗೂ'ನೆರೆ ಸಂತ್ರಸ್ತರ ಪರಿಹಾರ ನಿಧಿ ಲೆಕ್ಕಪತ್ರವನ್ನು ಬಿಡುಗಡೆ'

'ಸಂತ್ರಸ್ತರ ಬದುಕಿನ ಸಮಾಧಿಯ ಮೇಲೆ ಪಟ್ಟಾಭಿಷೇಕ'

ಸದಾ ಬರದಲ್ಲಿ ಮುಳುಗಿದ್ದ ಉತ್ತರ ಕರ್ನಾಟಕವು ಇಂದು ರಾಜ್ಯ ಕಂಡರಿಯದ ಭೀಕರ ನೆರೆ ಹಾವಳಿಗೆ ಸಿಲುಕಿ ನೂರಾರು ಜನ ಬಲಿಯಾಗಿ ಕೋಟ್ಯಾನು ಕೋಟಿ ಜನರು ಬೀದಿ ಪಾಲಾಗಿದ್ದರು. ರಸ್ತೆಬದಿಗಳಲ್ಲಿ ತಗಡುಗಳನ್ನು ಅಡ್ಡಲಾಗಿಟ್ಟುಕೊಂಡು ಮೈಮೇಲೆ ಸರಿಯಾದ ಬಟ್ಟೆಯಿಲ್ಲದೆ. ಕುಡಿಯಲು ಸರಿಯಾದ ನೀರು ಹಸಿವಿಗೆ ಹಿಡಿ ಅನ್ನ ಸಿಗದೆ ಒದ್ದಾಡುವ ಮಕ್ಕಳು, ವೃದ್ಧರ ಆಕ್ರಂಧನ. ನೆರೆಗೆ ಸಿಕ್ಕಿ ಸತ್ತ ಪ್ರಾಣಿಗಳು ಅಲ್ಲಲ್ಲಿ ಬಿದ್ದು ಕೊಳೆಯುತ್ತಿದ್ದವು. ಅವುಗಳನ್ನು ತಿನ್ನಲು ಹದ್ದು-ಕಾಗೆ, ನಾಯಿಗಳು ಸ್ಪರ್ಧೆಗೆ ಇಳಿದಿದ್ದವು. ಕೊಳೆತ ಶವಗಳ ಮೇಲೆ ನೊಣ ಸೊಳ್ಳೆಗಳು ಸಂಸಾರ ಸ್ಥಾಪಿಸಿ ಸಾಂಕ್ರಾಮಿಕ ರೋಗಗಳನ್ನು ಹಬ್ಬುತ್ತಿದ್ದವು. ಪ್ರತಿನಿತ್ಯ ಜನರು ಕಾಯಿಲೆ, ಹಸಿವುಗಳಿಂದ ಹಿಂಸಾತ್ಮಕವಾದ ಜೀವನ ನಡೆಸುತ್ತಿದ್ದರು.


ನೆರೆಪರಿಹಾರಕ್ಕಾಗಿ ರಾಜ್ಯದ ಜನತೆ, ಕೇಂದ್ರ ಸರ್ಕಾರ ಹಾಗೂ ಇತರೆಡೆಗಳಿಂದ ಬಂದ ಸಾವಿರಾರು ಕೋಟಿ ಸಹಾಯ ಧನವನ್ನು ಸರ್ಕಾರ ನೆರೆಪರಿಹಾರಕ್ಕೆ ಸರಿಯಾಗಿ ನಿರ್ವಹಿಸಲಿಲ್ಲ. ಮನೆ ಆಸ್ತಿ ಬದುಕು ಕಳೆದುಕೊಂಡು ಬೀದಿಗಳಲ್ಲಿ ಬಿಸಿಲು ಮಳೆಗೆ ತತ್ತರಿಸಿ ಅನ್ನ ನೀರು ಇಲ್ಲದೇ, ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಿ ಸಾಯುತ್ತಿದ್ದರೂ ಭ್ರಷ್ಟ ರಾಜ್ಯ ಸರ್ಕಾರವು ಆರೋಗ್ಯ ಹಾಗೂ ಗಂಜಿ ಕೇಂದ್ರಗಳನ್ನೂ ತೆರೆಯದೇ ಅತ್ಯಂತ ನಿರ್ಲಜ್ಜವಾಗಿ ನಡೆದುಕೊಂಡಿತ್ತು.



ಸಾಲದೆಂಬಂತೆ ಗಣಿ ಲೂಟಿಯ ಜರ್ನಾಧನ ರೆಡ್ಡಿಯ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಬದುಕುಗಳ ಸಮಾದಿ ಮೇಲೆ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸಿ ಕೃಷ್ಣದೇವರಾಯನ 500 ಪಟ್ಟಾಭಿಷೇಕವನ್ನು ವಿಜೃಂಭಣೆಯಿಂದ ನಡೆಸುವ ಹೀನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.



ದೇಶ-ವಿದೇಶಗಳಿಂದ ಮೂರು ಸಾವಿರ ಕಲಾವಿದರನ್ನು ಕರೆಸಿದರು. ನಿತ್ಯ ಸರಾಸರಿ ಸಾವಿರ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದು ಕೋಟ್ಯಾಂತರ ರೂಗಳನ್ನು ಹಾಳು ಮಾಡಲಾಯಿತು. ನೆರೆ ಪೀಡಿತರನ್ನು ಕಡೆಗಣಿಸಿ 500 ವರ್ಷಗಳ ಹಿಂದಿನ ರಾಜನೊಬ್ಬನ ಪಟ್ಟಾಭಿಷೇಕದ ಹೆಸರಿನಲ್ಲಿ ಖರ್ಚು ಮಾಡಿತು.  3 ದಿನಗಳ ಕಾಲ ಎಲ್ಲಾ ಮಂತ್ರಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದು ಅಮಾನವೀಯ ನಡತೆಯಾಗಿತ್ತು.

ಇದನ್ನು ಖಂಡಿಸಿ ಜನಾಸ್ತ್ರ ಸಂಘಟನೆಯು ಇತರ ಸಂಘಟನೆಗಳ ಜೊತೆ ಸೇರಿ ಬೆಂಗಳೂರಿನ ಟೌನ್ ಹಾಲ್ ನ ಬಳಿ ಪ್ರತಿಭಟನೆಯನ್ನು ಹಮ್ಮಿಕೊಂಡಿತು.

ಸಂಘಟನೆಯ  ಆದಿತ್ಯರವರು ಮಾತಾಡಿ, 'ರಾಜ್ಯ ಸರ್ಕಾರವು ಸಾವು ನೋವಿಗೆ ತುತ್ತಾದ ಉತ್ತರ ಕರ್ನಾಟಕದ ಜನತೆಯನ್ನು ನಿರ್ಲಕ್ಷ್ಯಿಸಿ ಅವರ ನೋವುಗಳಿಗೆ ಸ್ಪಂಧಿಸದೇ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಕೃಷ್ಣದೇವರಾಯ ಪಟ್ಟಾಭಿಷೇಕದ ಹೆಸರಿನಲ್ಲಿ ದರ್ಬಾರ್ ನಡೆಸಲು ಮುಂದಾಗಿರುವುದು ಮಾನಗೇಡಿತನ. ಜನರನ್ನು ಲೂಟಿ ಮಾಡಿ ವಂಶಪಾರಂಪರ್ಯದ ಆಡಳಿತ ದಬ್ಬಾಳಿಕೆಯನ್ನು ಹೇರುತ್ತಿದ್ದ ರಾಜರ ವ್ಯವಸ್ಥೆಯಿಂದ ಮುಕ್ತಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿರುವಾಗ ಕನ್ನಡ ವಿರೋಧಿ ರಾಜನೊಬ್ಬನ 500 ವರ್ಷಗಳ ಪಟ್ಟಾಭಿಕ್ಷೇಕವನ್ನು ನಡೆಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಇದೇ ರೀತಿಯ ತಾರತಮ್ಯ ಮುಂದುವರೆದರೆ ಮುದೊಂದು ದಿನ ಉತ್ತರ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುವುದು ಸ್ಪಷ್ಟ' ಎಂದು ಎಚ್ಚರಿಕೆ ನೀಡಿದರು.

ಸಮಾನತಾ ಮಹಿಳಾ ವೇದಿಕೆಯ ಮಲ್ಲಿಗೆ ಮಾತನಾಡಿ ಕೃಷ್ಣದೇವರಾಯನ ಆಳ್ವಿಕೆ ಜನಪರವಾಗಿರಲಿಲ್ಲ. ಅವನ  ಆಳ್ವಿಕೆಯಲ್ಲಿ ಸುಮಾರು 750 ರೈತ ದಂಗೆಗಳು ಆಗಿರುವುದೇ ಇದಕ್ಕೆ ಉದಾಹರಣೆ. ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿ ಸ್ಥಳೀಯರನ್ನು ಹಿಂಸಾತ್ಮಕ ಬದುಕಿಗೆ ತಳ್ಳಿದ ಕೃಷ್ಣದೇವರಾಯನ ಹುಟ್ಟುಹಬ್ಬಕ್ಕೆ ಸರ್ಕಾರ ಅಪಾರ ಹಣವನ್ನು ವ್ಯಯಿಸುತ್ತಿರುವುದು ಹಾಗೂ ನೆರೆಗೆ ಬಲಿಯಾಗಿ ಬೀದಿಪಾಲಾದ  ಉತ್ತರ ಕರ್ನಾಟಕದ ಜನರನ್ನು ನಿರ್ಲಕ್ಷಿಸಿದೆ'  ಎಂದು ಖಂಡಿಸಿದರು.

ಹೃದಯ ಹೀನ ಕ್ರಿಕೆಟಿಗರು


ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾಗ ರಾಜ್ಯದ ಜಿಲ್ಲೆಗಳ ಹೆಸರಿನಲ್ಲಿ ಜೂಜು ಆಡಿದ ಕ್ರಿಕೆಟ್ಟಿಗರು ಶೋಕಾಚರಣೆಯನ್ನೂ ಮಾಡದೇ ದುವರ್ತನೆ ತೋರಿದರು. ನಂತರ ರಾಯಲ್ ಚಾಲೆಂಜರ್ಸ್ನ ನಾಯಕ ಅನಿಲ್ ಕುಂಬ್ಳೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿ ಆ ಹಣವನ್ನು ಸಂತ್ರಸ್ತರಿಗೆ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ಅವರ ಆಷಾಡಭೂತಿತನ ಶೀಘ್ರದಲ್ಲೇ ಬಯಲಾಯಿತು. ಅವರಿಂದ ಅಂತಹ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಯತ್ನವೇ ಆಗಲಿಲ್ಲ.



ಬೆಂಗಳೂರಿನಲ್ಲಿ ಐಪಿಎಲ್ 20-20 ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಟಿ ಕೋಟಿ ವ್ಯಯಿಸಿ ಉನ್ಮಾದ ಮೆರೆದ ಕ್ರಿಕೆಟ್ ಸಂಸ್ಥೆಗಳು ಕನಿಷ್ಠ ಆ ಉದ್ಘಾಟನ ಕಾರ್ಯಕ್ರಮವನ್ನು ಸರಳವಾಗಿ ನಡೆಸಿ ಆ ಹಣವನ್ನು  ನೀಡಿದ್ದರೂ ಉತ್ತರ ಕರ್ನಾಟಕದ ಜನತೆಗೆ ಎಷ್ಟೋ ಅನುಕೂಲವಾಗುತ್ತಿತ್ತು. ಅಕ್ಷರಶಃ ಸ್ಮಶಾನದಂತಾಗಿದ್ದ ರಾಜ್ಯದ ರಾಜಧಾನಿಯಲ್ಲಿ ತಮ್ಮ ಪೈಶಾಚಿಕ ವೈಭವವನ್ನು ಮೆರೆದ ಕ್ರಿಕೆಟಿಗರ ರಾಜ್ಯಾಭಿಮಾನದ ನಯವಂಚಕತನ ರಾಜ್ಯದ ಜನತೆಯ ಮುಂದೆ ಬಹಿರಂಗಗೊಂಡಿತು. ತಮಗೆ ಎಲ್ಲವನ್ನೂ ನೀಡಿದ ರಾಜ್ಯದ ಜನತೆ ಬೀದಿಪಾಲಾದಾಗ ತಮ್ಮ ಮೋಜಿನಲ್ಲಿ ಮೈಮರೆತ ಆಟಗಾರರು ಕೂಡಲೇ ಅವರು ಜನತೆಯ ಕ್ಷಮೆಯಾಚಿಸಲಿ ಎಂದು ಛೀಮಾರಿ ಹಾಕಲಾಯಿತು.

'ನೆರೆ ನಿಧಿ ನುಂಗಿದೆಷ್ಟು ಲೆಕ್ಕ ಕೊಡಿ'


ಹಲವಾರು ಮಠಗಳು ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಪರಿಹಾರ ನಿಧಿಯ ಬಗ್ಗೆ ಈವರೆಗೂ ಸಾರ್ವಜನಿಕ ಲೆಕ್ಕಪತ್ರವನ್ನು ಬಿಡುಗಡೆ ಮಾಡದಿರುವುದನ್ನು ಸಂಘಟನೆ ಖಂಡಿಸುತ್ತದೆ. ಈ ಕೂಡಲೇ ನಿಧಿ ಸಂಗ್ರಹಿಸಿದ ಮಠಮಾನ್ಯಗಳು, ಸಂಘ-ಸಂಸ್ಥೆಗಳು ನಿಧಿ ಸಂಗ್ರಹಣೆಯ ವಿವರ ಬಹಿರಂಗ ಪಡಿಸಲು ಸಂಘಟನೆ ಒತ್ತಾಯಿಸಿತು.

ರಾಜ್ಯದ ಅಭಿವೃದ್ಧಿಗೆ ದುಡಿಯುತ್ತಿರುವ ಜನರನ್ನು ಹಾಗೂ ಹೈದರಾಬಾದ್ ಕರ್ನಾಟಕವನ್ನು ನಿರ್ಲಕ್ಷ್ಯಿಸುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿತು. ಸರ್ಕಾರವು ಈ ಕೂಡಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಯಾವುದೇ ಭೇದವನ್ನು ತೋರದೇ ಸೂಕ್ತ ಪರಿಹಾರ ನೀಡಬೇಕು. ಪರಿಹಾರದ ಹೆಸರಿನಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ಭ್ರಷ್ಟಾಚಾರವನ್ನು ತಡೆಯಬೇಕೆಂದು ಆಗ್ರಹಿಸಿತು. ಮುಂದಿನ ದಿನಗಳಲ್ಲಿ ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿದ ಕ್ರಿಕೆಟ್ ಪಟುಗಳು ಹಾಗೂ ಸರ್ಕಾರದ ವಿರುದ್ಧ ಸಂಘಟನೆಯು ರಾಜ್ಯದಾದ್ಯಂತ ಜನರನ್ನು ಸಂಘಟಿಸಿ ಆಂದೋಲನವನ್ನು ರೂಪಿಸಿ ಹೋರಾಟ ಕೈಗೊಳ್ಳುತ್ತದೆ ಎಂಬ  ಉದ್ಘೋಷಣೆಯೊಂದಿಗೆ ಜನಾಸ್ತ್ರ ಸಂಘಟನೆಯು ಪ್ರತಿಭಟನೆಯನ್ನು ಯಶಸ್ವಿಗೊಳಿಸಿತು.

ಉತ್ತರ ಕರ್ನಾಟಕದ  ನೊಂದ ಬಂಧುಗಳಿಗೆ ಸಂಘಟನೆಯು ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿ ವಿನಿಯೋಗಿಸಲು ನೆರೆಪೀಡಿತ ಪ್ರದೇಶಗಳಲ್ಲಿ ಜನಪರ ಸಂಘಟನೆಗಳೊಂದಿಗೆ ಸಮೀಕ್ಷೆ ನಡೆಸಿ 6-11-2009 ರಿಂದ 3ದಿನಗಳು ಸ್ವಯಂಸೇವಕ ತಂಡದೊಂದಿಗೆ ನೆರೆಪೀಡಿತ ಹೆಗ್ಗಸನಹಳ್ಳಿ ಗುರ್ಜಾಪುರ, ಕೋಳೂರು ಹಳೇ ತುಂಗಭದ್ರ ಗ್ರಾಮಗಳಿಗೆ ಪರಿಹಾರ ಹಂಚಲಾಯಿತು. ಸಂಘಟನೆ ಈ ಮೊದಲು ಪತ್ರಿಕಾಗೋಷ್ಠಿ ಕರೆದು ನಿಧಿ ಸಂಗ್ರಹಿಸುವ ಸಂಘ-ಸಂಸ್ಥೆಗಳು, ಮಠಮಾನ್ಯಗಳು ಹಾಗೂ ಸರ್ಕಾರ ಸಾರ್ವಜನಕರಿಗೆ ಪಾರದರ್ಶಕತೆಯನ್ನು ಕಾಪಾಡಲು ಕರೆನೀಡಿತ್ತು. ಸಂಘಟನೆಯು ತನ್ನ ನಿಲುವಿಗೆ ಬದ್ಧವಾಗಿ ಪರಿಹಾರ ನಿಧಿಯ ಲೆಕ್ಕಪತ್ತವನ್ನು ಬಿಡುಗಡೆ ಮಾಡಿತು.

ಸಂಘಟನೆಯ  ಒತ್ತಾಯದ ಫಲವಾಗಿ ಸರ್ಕಾರವು ಲೆಕ್ಕಪತ್ರವನ್ನು ಬಿಡುಗಡೆಗೊಳಿಸಿದ್ದು ಹೋರಾಟಕ್ಕೆ ಸಿಕ್ಕ ಪ್ರತಿಕ್ರಿಯೆಯಾಗಿತ್ತು.

Add caption
ಚೇತನಧಾರೆ ಹಾಗೂ ಜನಾಸ್ತ್ರ ಸಂಘಟನೆಗಳ ಕಾರ್ಯಕರ್ತೆ ಉಷಾರಾಣಿ, ಸಮಾನತಾ ಮಹಿಳಾ ವೇದಿಕೆಯ ಗೀತಾ ಹಾಗೂ ಅಂಬೇಡ್ಕರ್ ನವಯುವ ಶಕ್ತಿಯ ಗೋಪಾಲ್ ರವರು ಬಿಡುಗಡೆಗೊಳಿಸಿದರು. 'ಮಾಲಿನ್ಯವ ದೂರವಿಟ್ಟು ಮಾನವೀಯತೆಯ ದೀಪ ಹಚ್ಚಿ..' ಕಾರ್ಯಕ್ರಮದ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಸಂಘಟನೆಯು ಜವಾಬ್ದಾರಿಯುತವಾಗಿ ಸ್ಪಂಧಿಸಿದ ರಾಜ್ಯದ ಜನತೆಗೆ ಪ್ರೀತಿಯಿಂದ ಅಭಿನಂದಿಸಿತು.

ಕಾರ್ಯಕ್ರಮದಲ್ಲಿ: ಜನಾಸ್ತ್ರ ಸಂಘಟನೆ, ಚೇತನಧಾರೆ ಟ್ರಸ್ಟ್, ಸಮಾನತಾ ಮಹಿಳಾ ವೇದಿಕೆ, ಅಂಬೇಡ್ಕರ್ ನವಯುವ ಶಕ್ತಿ, ಸ್ಲಂ ಜನರ ವೇದಿಕೆ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆ, ಪ್ರಜಾತಾರೆ ಪತ್ರಿಕಾವೃಂದದ ಸದಸ್ಯರು ಭಾಗವಹಿಸಿದ್ದರು.