ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Wednesday, June 5, 2013

'ಮಾಲಿನ್ಯವ ದೂರವಿಟ್ಟುಮಾನವೀಯತೆಯ ದೀಪ ಹಚ್ಚಿ '


'ಮಾಲಿನ್ಯವ ದೂರವಿಟ್ಟುಮಾನವೀಯತೆಯ ದೀಪ ಹಚ್ಚಿ'


     ಉತ್ತರ ಕರ್ನಾಟಕವು ಸಂಪೂರ್ಣ ನೆರೆಪೀಡಿತವಾಗಿ ರಾಜ್ಯವು ಸಂಪೂರ್ಣ ಸೂತಕದ ಮನೆಯಾಗಿತ್ತು. ಸಾಮಾಜಿಕ ಕಳಕಳಿ ಹೊಂದಿದ ಜನಾಸ್ತ್ರ ಸಂಘಟನೆಯು 'ಮಾಲಿನ್ಯವ ದೂರವಿಟ್ಟು ಮಾನವೀಯತೆಯ ದೀಪ ಹಚ್ಚಿ..' ಎಂಬ ಕಾರ್ಯಕ್ರಮದ ಅಡಿಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಲು ನಿರ್ಧರಿಸಿತು. ಪತ್ರಿಕಾಗೋಷ್ಠಿ ಹಾಗೂ ಜಾಗೃತಿ ಕಾರ್ಯಕ್ರಮದ ಮೂಲಕ 'ರಾಜ್ಯದ ಜನತೆ ಹಾಗೂ ಸರ್ಕಾರ ಶಬ್ದ, ವಾಯುಮಾಲಿನ್ಯಕ್ಕೆ ಕಾರಣವಾಗುವ ಆಡಂಬರದ ದೀಪಾವಳಿ ಹಾಗೂ ರಾಜ್ಯೋತ್ಸವವನ್ನು ಮಾಡದೇ ಮೋಜಿನ ಕ್ರಿಕೆಟ್ನ್ನು ದೂರವಿಟ್ಟು ನೊಂದ ಬಂಧುಗಳ ನೆರವಿಗೆ ಧಾವಿಸಬೇಕು. ಸರ್ಕಾರ 73ನೇ ಕನ್ನಡದ ಸಾಹಿತ್ಯ ಸಮ್ಮೇಳನವನ್ನು ಕೂಡಲೇ ಮುಂದೂಡಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ತಲುಪಿಸಬೇಕು. ರಾಜ್ಯ ಸರ್ಕಾರ  ಜನ ಪ್ರತಿನಿಧಿಗಳು, ಮಠಗಳು ಸಂಘ-ಸಂಸ್ಥೆಗಳು ತಾವು ಪರಿಹಾರಧನದ ಹೆಸರಿನಲ್ಲಿ ಸಾರ್ವಜನಿಕರಿಂದ ಪಡೆದ ಹಣ ಇನ್ನಿತರ ನಿಧಿಯ ಬಗ್ಗೆ ಸಾರ್ವಜನಿಕವಾಗಿ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಪಾರದರ್ಶಕತೆಯನ್ನು ಕಾಪಾಡಬೇಕು.' ಮನವಿ ಮಾಡಿತು. ವಿವಿಧ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. 

ನಿಧಿ ಸಂಗ್ರಹಣೆ: 

ದಿನಾಂಕ: 18-10-09ರಂದು ಭಾನುವಾರ ಬೆಂಗಳೂರಿನ 1. ಮಹಾಲಕ್ಷ್ಮೀಲೇಔಟ್ ಈಜುಕೊಳ 2. ರಾಜಾಜಿನಗರ 1ನೇ ಬ್ಲಾಕ್ ವೃತ್ತ 3. ರಾಜಾಜಿನಗರ ನವರಂಗ್ ವೃತ್ತ 4. ಯಶವಂತಪುರ ಗಾಯಿತ್ರಿ ದೇವಾಲಯದ ವೃತ್ತ 5. ರಾಜಾಜಿನಗರ ಭಾಷ್ಯಂ ಸರ್ಕಲ್  6. ಶಂಕರ ಮಠ ವೃತ್ತ 7. ಡಾ.ರಾಜ್ಕುಮಾರ್ ಸಮಾಧಿ ಈ ಕೇಂದ್ರಗಳಲ್ಲಿ ಸಂಜೆವರೆಗೆ ಸಾರ್ವಜನಿಕರಿಂದ ಹಣ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿಲಾಯಿತು. 

ಸಂತಾಪ ಸೂಚಕ ಕಾರ್ಯಕ್ರಮ: ನಂತರ ಸಂಜೆ 5.30ಕ್ಕೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಅತಿವೃಷ್ಟಿಯಲ್ಲಿ ಮಡಿದ ನಾಗರೀಕ ಬಂಧುಗಳಿಗೆ ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಸಂತಾಪ ಸೂಚಿಸಲಾಯಿತು. ಕಾರಣಾಂತರಗಳಿಂದ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಕೋ.ಚನ್ನಬಸಪ್ಪ ಹಾಗೂ ಜಯಂತ್ ಕಾಯ್ಕಣಿಯವರ ಗೈರು ಹಾಜರಿಯಲ್ಲಿ ಪಿಯುಸಿಎಲ್ನ ಅಧ್ಯಕ್ಷರಾದ ಪ್ರೊ. ರಾಮದಾಸ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಜನಪರ ವೇದಿಕೆಯ ಕುಮಾರ್ ಸಮತಳರವರು ತಮ್ಮ ರಾಯಚೂರಿನ ಪ್ರವಾಸದ ಅನುಭವವನ್ನು ಹಂಚಿಕೊಂಡರು. ಹಿರಿಯರಾದ ರಾಮಸ್ವಾಮಿ, ಟಿ.ಆರ್.ನರ್ಮದಾರವರು ಇನ್ನಿತರ ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಜನತೆಯ ಪ್ರತಿಕ್ರಿಯೆ: 

ಜನಾಸ್ತ್ರ ಹಾಗೂ ಇನ್ನಿತರೆ ಸಂಘಟನೆಗಳ ಮನವಿಯ ಫಲವಾಗಿ ರಾಜ್ಯದ ಜನತೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದರು. ಹಲವು ರೀತಿಯಲ್ಲಿ ತಮ್ಮ ನೆರವು ನೀಡಿದ್ದ ಜನತೆ ಸ್ವಪ್ರೇರಿತರಾಗಿ ಸಂಘಟನೆಗೆ ತಮ್ಮ ಅಮೂಲ್ಯವಾದ ಕಾಣಿಕೆಗಳನ್ನು ನೀಡಿದರು. ಪತ್ರಿಕಾಗೋಷ್ಠಿ ನಡೆಸಿದ 2ನೇ ದಿನಕ್ಕೆ ಸಕರ್ಾರವು ಎಲ್ಲಾ ನಿಧಿ ಸಂಗ್ರಹಣೆಯೂ ಕಾನೂನು ಬದ್ಧಗೊಳಿಸಲು ಆದೇಶ ಹೊರಡಿಸಿದರು. ಇದು ಈ ನಿಟ್ಟಿನಲ್ಲಿ ಆಗಬಹುದಾಗಿದ್ದ ಹೆಚ್ಚಿನ ಭ್ರಷ್ಟಾಚಾರವನ್ನು ಕಡಿಮೆಗೊಳಿಸಿತ್ತಾದರೂ ರಾಜ್ಯದ ಜನತೆ ಸರ್ಕಾರಕ್ಕೆ ಸಲ್ಲಿಸಿದ ಸಾವಿರಾರು ಕೋಟಿ ನಿಧಿ ಸಂತ್ರಸ್ತರಿಗೆ ಇನ್ನೂ ತಲುಪದಿರುವುದು ವಿಪರ್ಯಾಸವೇ ಆಗಿದೆ.

ಸಂಘಟನೆಯು ಪುಟ್ಟದಾಗಿ ಸಂಗ್ರಹಿಸಿದ ಹಣ 29.628/- ಈ ಸಣ್ಣ ಮೊತ್ತವನ್ನು ಹೇಗೆ ಸಂತ್ರಸ್ತರಿಗೆ ತಲುಪಿಸುವುದು ಎಂದು ಯೋಚಿಸಿ ಕರ್ನಾಟಕ ಜನಪರ ವೇದಿಕೆ ಹಾಗೂ ಇತರ ಸಂಘಟನೆಗಳೊಂದಿಗೆ ಒಟ್ಟಾಗಿ ಕಾರ್ಯಕ್ರಮ ರೂಪಿಸಲಾಯಿತು. ಮೊದಲು ಹೆಚ್ಚಿನ ಹಾನಿಗೊಳಗಾದ ರಾಯಚೂರಿನ 'ಹೆಗ್ಗಸನಹಳ್ಳಿ ಗುಜರ್ಾಪುರ, ಕೋಳೂರು, ಹಳೇ ತುಂಗಭದ್ರ ಗ್ರಾಮ'ಗಳನ್ನು ಗುರುತಿಸಿ ಸಮೀಕ್ಷೆ ಮೂಲಕ ಅಲ್ಲಿನ ಜನರ ಅಗತ್ಯವನ್ನು ಗುರುತಿಸಲಾಯಿತು. ಸುಮಾರು 15ದಿನಗಳವರೆಗೆ ಹಣದ ಜೊತೆಗೆ ಹಲವಾರು ಹಿತೈಷಿಗಳಿಂದ ದಿನನಿತ್ಯದ ವಸ್ತುಗಳು ಹಾಗೂ ಬಟ್ಟೆಗಳನ್ನು ಸಂಗ್ರಹಿಸಲಾಯಿತು. ಈ ಗ್ರಾಮಗಳಿಗೆ ಅನುಕೂಲವಾಗುವಂತೆ 720 ಪ್ಯಾಕ್ಗಳನ್ನು ಮಾಡಲಾಯಿತು. (ಪ್ರತೀ ಪ್ಯಾಕ್ನಲ್ಲಿ ಸೀರೆ, ಪಂಚೆ, ಟವಲ್, ಪ್ಯಾಂಟ್, ಸ್ವೆಟರ್ ಹಾಗೂ ಬೆಡ್ ಶೀಟ್ ಇರುವಂತೆ) ಹೆಚ್ಚಿನವುಗಳನ್ನು ಹೊಸದಾಗಿ ಕೊಳ್ಳಲಾಯಿತು. 
  

ನೊಂದ ಮನಸುಗಳ ಹಾದಿಯಲ್ಲಿ...

ಪರಿಹಾರ ವಸ್ತುಗಳನ್ನು ವಿತರಿಸಲು ಎಲ್ಲಾ ಸಂಘಟನೆಗಳ ಕಾರ್ಯಕರ್ತರೂ ಒಳಗೊಂಡ ತಂಡದೊಂದಿಗೆ ಇವುಗಳನ್ನು ತೆಗೆದುಕೊಂಡು ನವೆಂಬರ್ 6ರ ರಾತ್ರಿ ಬೆಂಗಳೂರಿನಿಂದ ಹೊರಟು ರಾಯಚೂರು ತಲುಪಿದೆವು. 

1. ಹೆಗ್ಗಸನಹಳ್ಳಿ: 

ರಾಯಚೂರಿನ ಶಕ್ತಿನಗರದ ಪಕ್ಕದ ಹೆಗ್ಗಸನಹಳ್ಳಿ ನಾವು ಪರಿಹಾರ ಸಾಮಗ್ರಿ ತಲುಪಿಸಿದ ಮೊದಲ ಊರು. ಈ ಹಳ್ಳಿ ಕೃಷ್ಣಾ ನದಿ ಹತ್ತಿರವಿದೆ. ಇಲ್ಲಿ ನೀರು ನುಗ್ಗಿರುವ ರಭಸಕ್ಕೆ ಬೆಂಗಳೂರು, ದೆಹಲಿ ರೈಲು ಮಾರ್ಗವೇ ಸಂಪೂರ್ಣ ಕಿತ್ತುಹೋಗಿದೆ. 

2. ಗುರ್ಜಾಪುರ: 

ಎರಡನೆಯದು ರಾಯಚೂರು ತಾಲೂಕಿನದ್ದೇ ಮತ್ತೊಂದು ಹಳ್ಳಿ ಗುರ್ಜಾಪುರ. ಈ ಹಳ್ಳಿಗೆ ಕೃಷ್ಣಾ ನದಿ ನೀರಿನ ಜೊತೆ ಮತ್ತೊಂದು ಹಳ್ಳದ ನೀರು ಎರಡೂ ಸೇರಿ ಸಾಕಷ್ಟು ಹಾನಿ ಮಾಡಿವೆ. 

3. ಕೋಳೂರು: 

ನಾವು ಹೋದ ಮೂರನೆಯ ಊರು ಕೋಳೂರು. ಇದು ದೇವದುರ್ಗ ತಾಲೂಕಿನ ಅಂಚಿನಲ್ಲಿರುವ ಹಳ್ಳಿ. ಈ ಹಳ್ಳಿಯ ಸುತ್ತಲೂ ಎರಡು ಹಳ್ಳಗಳು ಸರ್ಪದಂತೆ ಸುತ್ತಿಕೊಂಡಿದ್ದು ಸಾಕಷ್ಟು ತೊಂದರೆಯಲ್ಲಿದ್ದಾರೆ. ಸಮೀಪದ ಗಬ್ಬೂರು ಮತ್ತು ರಾಯಚೂರಿಗೆ ಬರಲು ಇವತ್ತಿಗೂ ಸೇತುವೆಯಿಲ್ಲ. ಕೋಳೂರು ಹೆಚ್ಚು ಕಡಿಮೆ ಸಂಪೂರ್ಣ ನಾಶವಾಗಿದೆ. ಕೆಲವೆಡೆ ಮನೆಯಿತ್ತು ಎಂಬ ಗುರುತೂ ಸಹ ಉಳಿದಿಲ್ಲ. 

4. ಹಳೇ ತುಂಗಭದ್ರ ಗ್ರಾಮ: 

ಕೊನೆಯದಾಗಿ ತುಂಗಭದ್ರ ನದಿಯ ತಟದಲ್ಲಿರುವ ಹಳೇ ತುಂಗಭದ್ರ ಗ್ರಾಮ. ಈ ಊರಿನಲ್ಲಿ ಒಂದು ಮನೆಯೂ ಉಳಿದಿಲ್ಲ. ಎಲ್ಲವೂ ಸಂಪೂರ್ಣ ನಾಶವಾಗಿದೆ. ಪಾತ್ರೆ ಇತ್ಯಾದಿ ಏನೂ ಉಳಿದುಕೊಂಡಿಲ್ಲ. ಮನೆಗಳ ಸಂಖ್ಯೆ: ಈ ಊರಿನ ಪಕ್ಕದಲ್ಲೇ ತುಂಗಭದ್ರಾ ನದಿಗೆ ಕಟ್ಟಿರುವ ದೊಡ್ಡ ಸೇತುವೆಯೇ ಕೊಚ್ಚಿಕೊಂಡು ಹೋಗಿದೆ. ನದಿಯ ಆ ಕಡೆಯ ಆಂಧ್ರ ಭಾಗದಲ್ಲಿ ನಾಲ್ಕು ಕಿ.ಮೀ. ದೂರದಲ್ಲಿ ಮಂತ್ರಾಲಯ ಬರುತ್ತದೆ. ಅಲ್ಲಿನ ಸ್ವಾಮೀಜಿಯನ್ನು ಹೆಲಿಕಾಪ್ಟರ್ನಲ್ಲಿ ಹೊತ್ತುಕೊಂಡು ಬಂದು, ಮಂತ್ರಾಲಯದ ಪುನರ್ ನಿರ್ಮಾಣಕ್ಕೆ ಕೋಟಿಯನ್ನು 3 ದಿನದಲ್ಲೇ ಘೋಷಿಸಿದ ರಾಜ್ಯ ಸರ್ಕಾರ, ನಾವು ಹೋಗುವವರೆಗೂ ಹಳೇ ತುಂಗಭದ್ರಾ ಗ್ರಾಮಕ್ಕೆ ಅಂತಹ ಯಾವ ಭರವಸೆಯನ್ನೂ ನೀಡಿರಲಿಲ್ಲ. ಸಂಪೂರ್ಣ ಮನೆ ನಾಶವಾದರೆ ನೀಡುವ 37 ಸಾವಿರ ರೂ. ಈ ಊರಿನ ಒಂದು ಮನೆಗೂ ತಲುಪಿಲ್ಲ. ಈ ಚಿಕ್ಕ ಊರಿನ ಎಲ್ಲಾ ಕುಟುಂಬಗಳಿಗೆ ಬಟ್ಟೆ, ಬೆಡ್ಶೀಟ್ ಪ್ಯಾಕ್ ಜೊತೆ ಪಾತ್ರ್ರೆಗಳನ್ನೂ ಹಂಚಲಾಯಿತು. 

ದುಡಿದ ಕೈಗಳಿಗೆ ಸಾಸಿವೆ: 

ಸರ್ಕಾರದ ಮೇಲೆ ನಂಬಿಕೆಯಿಲ್ಲದೆ, ನೇರವಾಗಿ ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವವರಿಗೆ ಮಾತ್ರ ಕೊಡಬೇಕು ಎಂದುಕೊಂಡಿದ್ದ ನಮ್ಮ ಕರೆಗೆ ಜನ ಉತ್ತಮ ರೀತಿ ಪ್ರತಿಕ್ರಿಯಿಸಿದ್ದರು. ಅದರಂತೆಯೇ ಈ ಪರಿಹಾರ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಊರುಗಳಲ್ಲಿದ್ದ ಸಂಘಟನೆಯ ಕೆಲವು ಪ್ರಾಮಾಣಿಕ ಕಾರ್ಯಕರ್ತರು ಯಾವುದೇ ಗೊಂದಲಗಳಿಲ್ಲದೆ ಪರಿಹಾರ ಸಾಮಗ್ರಿ ವಿತರಣೆಯಾಗಲು ವ್ಯವಸ್ಥೆ ಮಾಡಿದ್ದರು. 

ನಾಡು ಕಟ್ಟಿದ ಜನರ ಸಂಕಷ್ಟಕ್ಕೆ ಸ್ಪಂಧಿಸುವುದು ಎಲ್ಲರ ಜವಾಬ್ದಾರಿ ಎಂದು ಪ್ರಜ್ಞೆಯನ್ನು ಬೆಳೆಸಲು ಸಂಘಟನೆ ಯಶಸ್ವಿಯಾಗಿದೆ. ನಾಡಿನ ಏಳ್ಗೆಗೆ ದುಡಿಯುದ ಕೈಗಳಿಗೆ ಸಿಕ್ಕಿರುವುದು ಸಾಸಿವೆಯಷ್ಟು ನೆರವು. ಅದೂ ಸಹ ಶೂನ್ಯವೇ ಸರಿ. 
''ಸರ್ಕಾರದಿಂದ ನಮಗೇನೂ ಸಿಕ್ಕಿಲ್ಲ. ಮನೆಗಳು ಪೂರ ಕೊಚ್ಚಿ ಹೋಗಿದ್ದರೂ ಸಿಕ್ಕಿರುವ ಪರಿಹಾರ ಹೆಚ್ಚೆಂದರೆ 2ರಿಂದ 7 ಸಾವಿರ ರೂ.ಗಳ ಚೆಕ್' ಎಂದು ಬಹುತೇಕ ಎಲ್ಲೆಡೆ ಜನರು ಹೇಳುತ್ತಿದ್ದರು. ಅದೇ ಸಂದರ್ಭದಲ್ಲಿ ಅವರ ನೆರವಿಗೆ ನಿಂತು ಸಹಾಯ ಹಸ್ತವನ್ನು ನೀಡಿದ ರಾಜ್ಯದ ಇತರ ಭಾಗಗಳ ಜನತೆ ಮತ್ತು ಸಂಘ ಸಂಸ್ಥೆಗಳನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದರು.

ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆಯ ಕಾವು:

  ರೈತರು ಹಾಗೂ ಉತ್ತರ ಕರ್ನಾಟಕ ಜನರ ನೇತೃತ್ವದಲ್ಲಿ  'ನೆರೆ ಸಂತ್ರಸ್ತರ ಸಮಿತಿ' ಸ್ಥಾಪಿಸಿ ನಮ್ಮ ಸಮಿತಿಯಿಂದ   ಪತ್ರಿಕಾಗೋಷ್ಠಿ ನಡೆಸಿ 'ಸತ್ಯಶೋಧನಾ ವರದಿ'ಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯೊಂದಿಗೆ ಸೇರಿ ಪ್ರತಿಭಟನಾ ರಾಲಿ ಹಾಗೂ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.



     
ನಾಡಿನ ಅಭಿವೃದ್ಧಿಯಲ್ಲಿ ಅಪಾರ ಕೊಡುಗೆ ನೀಡಿರುವ ಉತ್ತರ ಕರ್ನಾಟಕದ ಜನತೆಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲದಾಗಿದೆ. ನೆರವಿಗೆ ಬಾರದ ಸರ್ಕಾರಕ್ಕೆ ಶಾಪ ಹಾಕುತ್ತಿದ್ದರು. ಜನರ ಸಂಕಷ್ಟ ಸ್ಥಿತಿ ಮನ ಕಲಕುವಂತಿತ್ತು. ಜನ ಪ್ರತಿನಿಧಿಗಳು ಮನುಷ್ಯತ್ವ ಮರೆತು ವರ್ತಿಸಿದ್ದಾರೆ. 

ಪ್ರಕೃತಿಯ ವಿಕೋಪ ಮತ್ತು ಸರ್ಕಾರಗಳ ನಿರ್ಲಕ್ಷ್ಯಗಳೆರಡೂ ಸೇರಿ ಈ ಭಾಗದ ಜನಜೀವನವನ್ನು ಕೆಲ ದಶಕಗಳಷ್ಟು ಹಿಂದಕ್ಕೆ ತಳ್ಳಿದೆ. ಹಾಗಾಗಿ ಕನರ್ಾಟಕದ ಅತ್ಯಂತ ಹಿಂದುಳಿದ ಭಾಗವಾದ ಈ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಗಳು ನಡೆಯಬೇಕಿದೆ. ಬೆಂದ ಮನೆಯಲ್ಲಿ ಗಳ ಹಿಡಿಯುತ್ತಿರುವ ಇಲ್ಲಿನ ರಾಜಕಾರಣಿಗಳು ಅಂತಹ ಪ್ರಯತ್ನ ತಮ್ಮಂತೆ ತಾವೇ ಮಾಡುತ್ತಾರೆಂಬ ಯಾವ ಭರವಸೆಯೂ ಇಲ್ಲ. ಈ ನಿಟ್ಟಿನಲ್ಲಿ ನಾಡಿನ ಪ್ರಜ್ಞಾವಂತ ಜನತೆ ಮತ್ತು ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಒತ್ತಡ ತರುವ ಕೆಲಸವನ್ನು ಮಾಡಬೇಕಿದೆ.

 ವಿಶೇಷ ಅಭಿನಂದನೆಗಳು: 

ಕಿರ್ಲೋಸ್ಕರ್ ಫೌಂಡ್ರಿಯ, ಗೌತಮ ಕಾಲೋನಿ ಹಾಗೂ ಮಹಾಲಕ್ಷ್ಮೀಪುರ ನಿವಾಸಿಗಳು ಮೊದಲೇ ಹಲವಾರು ರೀತಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿದ್ದರೂ ನಮ್ಮ ಸಂಘಟನೆ ಮನೆ ಬಾಗಿಲಿಗೆ ಹೋದಾಗ ಬರೀ ಕೈಯಲ್ಲಿ ಹಿಂತಿರುಗಿಸದೇ ತಮ್ಮ ಕಾಣಿಕೆ ಹಾಗೂ ಬೆಂಬಲಕ್ಕೆ ನಾವು ಸದಾ ಋಣಿಗಳು. ಪಿಯುಸಿಎಲ್ನ ಪ್ರೋ. ರಾಮದಾಸ್ ರಾವ್, ವೆಂಕಟಸ್ವಾಮಿಯವರು, ಜನಪರ ವೇದಿಕೆಯ ಕುಮಾರ್ ಸಮತಳ ಹಾಗೂ ವಿಶೇಷವಾಗಿ ಸಂಗ್ರಹಿಸಲಾದ ವಸ್ತುಗಳನ್ನು ಜೋಡಿಸಿಕೊಳ್ಳಲು ಸ್ಥಳಾವಕಾಶ ಹಾಗೂ ಬೆಂಬಲ ನೀಡಿದ ವಿವೇಕ್ ಮೆಮೋರಿಯಲ್ ಟ್ರಸ್ಟ್ನ ಟಿ.ಆರ್.ನರ್ಮದಾರವರಿಗೆ ಧನ್ಯವಾದಗಳು. ಹೆಗಲಿಗೆ ಹೆಗಲು ನೀಡಿದ ಸಮಾನತಾ ಮಹಿಳಾ ವೇದಿಕೆ, ಕರ್ನಾಟಕ ಜನಪರ ವೇದಿಕೆ, ಗೌರಿ ಲಂಕೇಶ್ ಬಳಗ, JOIN US TO HELP, ಪೆಡೆಸ್ಟ್ರಿಯನ್ ಪಿಕ್ಚರ್ಸ್, ಮಂಡ್ಯನಗರ ಸ್ಲಂ ನಿವಾಸಿಗಳ ಒಕ್ಕೂಟ, ಮಂಡ್ಯ ರೈಲ್ವೆ ಗೂಡ್ಶೆಡ್ಸ್ ಕಾರ್ಮಿಕರ ಸಂಘ, ಮಂಡ್ಯ ಕೆ.ಎಸ್.ಡಿ.ಎಲ್. ಕಾರ್ಮಿಕರ ಸಂಘ. ಹಾಗೂ ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಹೃದಯ ತುಂಬಿ ಅಭಿನಂದನೆಗಳನ್ನು ಅಪರ್ಿಸುತ್ತೇವೆ. 




ಹೆಚ್ಚಿನ ಮಾಹಿತಿಗೆ:


ಚೇತನಧಾರೆ ಟ್ರಸ್ಟ್ ಮತ್ತು ಜನಾಸ್ತ್ರ ಸಂಘಟನೆ.ನಂ.10, 2ನೇ ಅಡ್ಡರಸ್ತೆ, ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು- 560022.
ಫೋ: 9448702368.
                         http://bangaloreslumyouth.blogspot.in/                http://www.swabhimanimahilahorata.blogspot.in/